ಬಾಬ್ಸನ್, ರೋಜರ್ ವಾರ್ಡ್
1875-1967. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಅರ್ಥಸಂಖ್ಯಾಕಲನವಿಜ್ಞಾನಿ ಮತ್ತು ಶಿಕ್ಷಣತಜ್ಞ. ಮಸಾಚ್ಯೂಸೆಟ್ಸ್ ರಾಜ್ಯದ ಗ್ಲಾಸೆಸ್ಟರ್‍ನಲ್ಲಿ 1875 ರಲ್ಲಿ ಜನನ. 1898 ಮಸಾಚ್ಯೂಸೆಟ್ಸ್‍ನ ತಾಂತ್ರಿಕ ಸಂಸ್ಥೆಯಿಂದ ಪದವಿ ಪಡೆದ. 1904ರಲ್ಲಿ ಸಂಖ್ಯಾಕಲನ ವಿಜ್ಞಾನ ಸಂಸ್ಥೆಯನ್ನು ಪ್ರಾರಂಭಿಸಿ ವಾಣಿಜ್ಯೋದ್ಯಮಿಗಳಿಗೆ ಸಲಹೆ ನೀಡಲಾರಂಭಿಸಿದ. ವಾಣಿಜ್ಯ ವಿಷಯಗಳಲ್ಲಿ ಯುವಕರಿಗೆ ತರಬೇತಿ ನೀಡಲು 1919ರಲ್ಲಿ ವೆಲ್ಲೆಸ್ಲಿ ಸಮೀಪದಲ್ಲಿ ಬಾಬ್‍ಸನ್ ಸಂಸ್ಥೆಯನ್ನು ತೆರೆದ. ಮಹಿಳೆಯರಿಗೂ ತರಬೇತಿ ನೀಡಲು ಬಾಬ್‍ಸನ್ ಫ್ಲಾರಿಡದಲ್ಲಿ ವೆಬ್ಬರ್ ಕಾಲೇಜನ್ನು 1927ರಲ್ಲಿ ಪ್ರಾರಂಭಿಸಿದ. 1929ರ ಆರ್ಥಿಕ ದುಸ್ಥಿತಿಯನ್ನು ಕುರಿತು ಮೊದಲೇ ಎಚ್ಚರಿಕೆ ನೀಡಿದ. ಇದರಿಂದಾಗಿ ಬಾಬ್‍ಸನ್ ಪ್ರಸಿದ್ಧನಾದ. ಇವನು ಸ್ಥಾಪಿಸಿದ ಬಾಬ್‍ಸನ್ ಸಂಸ್ಥೆ ಇಂದು ಬಾಬ್ ಕಾಲೇಜ್ ಎಂದು ಪ್ರಸಿದ್ಧವಾಗಿದೆ. ಈ ಕಾಲೇಜಿನಲ್ಲಿ ಐಸಾಕ್ ನ್ಯೂಟನ್ನನ ಬರಹಗಳ ಮತ್ತು ಆತನಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹವಿದೆ. ಸಂಖ್ಯಾಕಲನವಿಜ್ಞಾನ, ಅರ್ಥಶಾಸ್ತ್ರ, ಧರ್ಮ, ವಾಣಿಜ್ಯ ಮುಂತಾದವುಗಳ ಕುರಿತಂತೆ ಬಾಬ್‍ಸನ್ 35 ಗ್ರಂಥಗಳನ್ನು ಬರೆದಿದ್ದಾನೆ.
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ